ಕೇಶವ ನಾಮ || KESHAVA NAMA
ಈಶ ನಿನ್ನ ಚರಣ ಭಜನೆ |
ಆಸೆಯಿಂದ ಮಾಡುವೆನು
ದೋಷ ರಾಶಿ ನಾಶಮಾಡು ಶ್ರೀಶ ಕೇಶವ ||
ಶರಣು ಹೊಕ್ಕೆನಯ್ಯ ಎನ್ನ
ಮರಣ ಸಮಯದಲ್ಲಿ ನಿನ್ನ
ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ ||
ಶೋಧಿಸೆನ್ನ ಭವದ ಕಲುಶ
ಬೋಧಿಸಯ್ಯ ಜ್ಞಾನವೆನಗೆ
ಭಾಧಿಸುವ ಯಮನ ಬಾಧೆ ಬಿಡಿಸು ಮಾಧವ ||
ಹಿಂದನೇಕ ಯೋನಿಗಳಲಿ
ಬಂದು ಬಂದು ನೊಂದೆನಯ್ಯ
ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ ||
ಭ್ರಷ್ಟನೆನಿಸಬೇಡ ಕೃಷ್ಣ
ಇಷ್ಟು ಮಾತ್ರ ಬೇಡಿ ಕೊಂಬೆ
ಶಿಷ್ಟರೊಡನೆ ಇಟ್ಟು ಕಷ್ಟ ಬಿಡಿಸು ವಿಷ್ಣುವೆ ||
ಮದನನಯ್ಯ ನಿನ್ನ ಮಹಿಮೆ
ವದನದಲ್ಲಿ ನುಡಿಯುವಂತೆ
ಹೃದಯದಲ್ಲಿ ಹುದುಗಿಸಯ್ಯ ಮಧುಸೂದನ||
ಕವಿದುಕೊಂಡು ಇರುವ ಪಾಪ
ಸವೆದು ಪೋಗುವಂತೆ ಮಾಡಿ
ಜವನ ಬಾಧೆಯನ್ನು ಬಿಡಿಸೋ ಶ್ರೀ ತ್ರಿವಿಕ್ರಮ ||
ಕಾಮಜನಕ ನಿನ್ನ ನಾಮ
ಪ್ರೇಮದಿಂದ ಪಾಡುವಂಥ
ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ ||
ಮೊದಲು ನಿನ್ನ ಪಾದ ಪೂಜೆ
ಒದಗುವಂತೆ ಮಾಡೋ ಎನ್ನ
ಹೃದಯದೊಳಗೆ ಸದನ ಮಾಡು, ಮುದದಿ ಶ್ರೀಧರ ||
ಹುಸಿಯನಾಡಿ ಹೊಟ್ಟೆ ಹೊರೆವ
ವಿಷಯದಲ್ಲಿ ರಸಿಕನೆಂದು
ಹುಸಿಗೆ ಹಾಕದಿರೋ ಎನ್ನ ಹೃಷಿಕೇಶನೇ||
ಕಾಮಕ್ರೋದ ಬಿಡಿಸಿ ನಿನ್ನ
ನಾಮಜಿಹ್ವೆಯೊಳಗೆ ನುಡಿಸು
ಶ್ರೀ ಮಹಾನುಭಾವನಾದ ದಾಮೋದರ ||
ಬಿದ್ದು ಭವದನೇಕ ಜನುಮ
ಬದ್ಧನಾಗಿ ಕಲುಷದಿಂದ
ಗೆದ್ದು ಪೋಪ ಬುದ್ಧಿ ತೋರೋ ಪದ್ಮನಾಭನೆ ||
ಪಂಕಜಾಕ್ಷ ನೀನೇ ಎನ್ನ
ಮಂಕು ಬುದ್ಧಿಯನ್ನು ಬಿಡಿಸಿ
ಕಿಂಕರನ್ನ ಮಾಡಿಕೊಳ್ಳೋ ಸಂಕರ್ಷಣ||
ಏಸು ಜನ್ಮ ಬಂದರೇನು
ದಾಸನಲ್ಲವೇನು ನಾನು
ಗಾಸಿ ಮಾಡದಿರು ಇನ್ನು ವಾಸುದೇವನೇ ||
ಬುದ್ಧಿಶೂನ್ಯನಾಗಿ ಎನ್ನ
ಬದ್ಧ ಕಾಯ ಕುಹಕ ಮನವ
ತಿದ್ದಿ ಹೃದಯ ಶುದ್ಧ ಮಾಡೊ ಪ್ರದ್ಯುಮ್ನನೇ ||
ಜನನಿ ಜನಕ ನೀನೆ ಎಂದು
ನೆನೆವೆನಯ್ಯ ದೀನ ಬಂದು
ಎನಗೆ ಮುಕ್ತಿ ಪಾಲಿಸಿ ನ್ನು ಅನಿರುದ್ಧನೆ ||
ಹರುಷದಿಂದ ನಿನ್ನ ನಾಮ
ಸ್ಮರಿಸುವಂತೆ ಮಾಡು ಕ್ಷೇಮ
ಇರಿಸು ಚರಣದಲ್ಲಿ ಪ್ರೇಮ ಪುರುಷೋತ್ತಮ ||
ಸಾಧುಸಂಗ ಕೊಟ್ಟು ನಿನ್ನ
ಪಾದ ಭಜನೆ ಇತ್ತು ಎನ್ನ
ಭೇದ ಮಾಡಿ ನೋಡದಿರೋ ಹೇ ಅಧೋಕ್ಷಜ||
ಚಾರುಚರಣ ತೋರಿ ಎನಗೆ
ಪಾರುಗಾಣೀಸಯ್ಯ ಕೊನೆಗೆ
ಭಾರ ಹಾಕಿರುವೆ ನಿನಗೆ ನಾರಸಿಂಹನೆ ||
ಸಂಚಿತಾದಿ ಪಾಪಗಳು
ಕಿಂಚಿತಾದ ಪೀಡೆಗಳನು
ಮುಂಚಿತಾಗಿ ಕಳೆಯಬೇಕು ಸ್ವಾಮಿ ಅಚ್ಯುತ ||
ಜ್ಞಾನಭಕುತಿ ಕೊಟ್ಟು ನಿನ್ನ
ಧ್ಯಾನದಲ್ಲಿ ಇಟ್ಟು ಸದಾ
ಹೀನ ಬುದ್ಧಿ ಬಿಡಿಸೋ ಮುನ್ನ ಶ್ರೀ ಜನಾರ್ಧನ ||
ಜಪತಪ ಅನುಷ್ಠಾನವಿಲ್ಲ
ಕುಪತಗಾಮಿಯಾದ ಎನ್ನ
ಕೃಪೆಯ ಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೆ ||
ಮೊರೆಯ ಇಡುವೆನಯ್ಯ ನಿನಗೆ
ಶರಧೀಶಯನ ಶುಭಮತಿಯ
ಇರಿಸೋ ಭಕ್ತರೊಳಗೆ ಪರಮಪುರುಷ ಶ್ರೀಹರೇ ||
ಪುಟ್ಟಿಸಲೇಬೇಡ ಇನ್ನು
ಪುಟ್ಟಿಸಿದಕೆ ಪಾಲಿಸಿನ್ನು
ಇಷ್ಟು ಮಾತ್ರ ಬೇಡಿ ಕೊಂಬೆ ಶ್ರೀ ಕೃಷ್ಣನೇ ||
ಸತ್ಯವಾದ ನಾಮಗಳನು
ನಿತ್ಯದಲ್ಲಿ ಪಠಿಸುವರಿಗೆ
ಅರ್ಥಿಯಿಂದ ಸಲಹುತಿರುವ ಕರ್ತೃ ಕೇಶವ ||
ಮರೆಯದಲಿ ಹರಿಯ ನಾಮ
ಬರೆದು ಓದಿ ಪೇಳ್ದವರಿಗೆ
ಕರೆದು ಮುಕ್ತಿ ಕೊಡುವ ನೆಲೆಯಾದಿ ಕೇಶವ ||
ನಿಮಗೆ ಹೇಳಲು ಬರದಿದ್ದರೆ ಈ ವಿಡಿಯೋ ನೋಡಿ ಇದರಲ್ಲಿ ಸರಳವಾಗಿ ಹೇಗೆ ಹೇಳುವುದು ಎಂದು ತಿಳಿಸಿದ್ದೆನೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
Pls do not enter any spam link in the coment box