ಅನುಪಮ ತ್ಯಾಗಶೀಲೆ ಲೋಕಮಾತೆ ಶ್ರೀ ವಾಸವಿ ಕನ್ಯಕಾಪರಮೇಶ್ವರೀ

‌      ‌              ‌     ‌                                                                                                               ‌                                                                                          


"ಕನ್ಯಕಾಪರಮೇಶ್ವರಿ ಆದಿಶಕ್ತಿ ಅವತಾರ"
ಕೃತೇತು ರೇಣುಕಾದೇವಿಂ| ತ್ರೇತಾಯಾಂ ಜನಕಾತ್ಮಜಾಂ|
ದ್ವಾಪರೇ ದ್ರೌಪದೀ ದೇವಿಂ| ಕೃತೇ ವಾಸವ ಕನ್ಯಕಾಂ||
ನಿರಂತರ ಭಜಾಮ್ಯೇವ| ಸಾಕ್ಷಾತ್ರಿಪುರ ಸುಂದರಿಂ|
ಧರ್ಮಾರ್ಥ ಕಾಮ ಮೋಕ್ಷಾರ್ಥಂ| ತ್ರಿಲೋಕ ಜನನಿಂ ಶಿವಾಂ||


ನಾಳೆ ಏಪ್ರಿಲ್ 30, ರವಿವಾರ - ವೈಶಾಖ ಶುದ್ಧ ದಶಮಿ - *ಶ್ರೀ ವಾಸವಾಂಬ ಜಯಂತಿ*      ‌    ‌    ‌    ‌                                                    ‌                                                                                               ಇತಿಹಾಸದಲ್ಲಿ, ಹೆಣ್ಣಿನ ಔನ್ನತ್ಯವನ್ನು ಪ್ರಬಲವಾದ ನಿದರ್ಶನಗಳ ಮೂಲಕ ಸಾರಿ ಸಾರಿ ಹೇಳುತ್ತದೆ. ತ್ರೇತಾಯುಗದಲ್ಲಿ ಸೀತೇ ರಾವಣನನ್ನು ಧಿಕ್ಕರಿಸಿ, ಮೌನ ಪ್ರತಿಭಟನೆಯಿಂದ ಅಶೋಕ ವನದಲ್ಲಿ ಒಂಟಿಯಾಗಿ ಕಳೆದು, ರಾಮಾಯಣದ ಯುದ್ಧಕಾಂಡಕ್ಕೆ ಮುನ್ನುಡಿ ಹಾಡಿ, ಅಸುರ ಸಂಹಾರಕ್ಕೆ ಪ್ರೇರಣೆಯಾದಳು. ದ್ವಾಪರ ಯುಗದಲ್ಲಿ ದ್ರೌಪದಿ ಛಲ ಮತ್ತು ಹೋರಾಟ ವ್ಯಕ್ತಿತ್ವದಿಂದ ಕುರುಕ್ಷೇತ್ರ ಯುದ್ಧಕ್ಕೆ ನಾಂದಿ ಹಾಡಿ ದುಷ್ಟ ಸಂಹಾರಕ್ಕೆ ಕಾರಣಳಾದಳು.

ವ್ಯಾಪರೋದ್ಯಮವನ್ನೇ ಪ್ರಧಾನ ವೃತ್ತಿಯಾಗಿ ಹೊಂದಿರುವ ಆರ್ಯ ವೈಶ್ಯರ ಕುಲದೇವತೆ ಶ್ರೀ ಕನ್ಯಕಾಪರಮೇಶ್ವರಿ. 'ವಾಸವಿ' ಲೋಕಮಾತೆಯಾಗಿ ಬೆಳಗಿದ ಅನುಪಮ ತ್ಯಾಗಶೀಲೆ, ಸತ್ಯ ಅಹಿಂಸೆಗಳ ಸಾಕಾರಮೂರ್ತಿ, ಸ್ಕಂದ ಪುರಾಣದಲ್ಲಿ ವಾಸವಿ ಚರಿತ್ರೆಯು ಉಲ್ಲೇಖಗೊಂಡಿದೆ.

ನ್ಯಾಯ, ನೀತಿ ಧರ್ಮಗಳ ಅಡಿಗಲ್ಲುಗಳ ಮೇಲೆ ನಿಂತ ಹದಿನೆಂಟು ನಗರಗಳ ರಾಜ್ಯ ರಾಜಧಾನಿ ಪೆನುಗೊಂಡ (ಈಗಿನ ಆಂಧ್ರಪ್ರದೇಶಸ ಪಶ್ಚಿಮ ಗೋದಾವರಿ ಜಿಲ್ಲೆ) ಸಂಪದ್ಭರಿತ ಪದ್ಮಶಯನಪುರದ ರಾಜ ವಿಷ್ಣುವರ್ಧನನ ಸಾಮಂತನಾಗಿದ್ದ. ಕುಬೇರ ವಂಶದ ಕುಸುಮ ಶ್ರೇಷ್ಠ ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದ.

ರಾಜನಿಗೆ ಮಕ್ಕಳಿಲ್ಲದ ಕೊರಗು, ವ್ರತ-ನಿಯಮ, ದಾನ-ಧರ್ಮ, ಹರಕೆ-ತೀರ್ಥಯಾತ್ರೆಗಳನ್ನು ಮಾಡಿದರೂ ಒಡಲು ಬರಿದು. ಕೊನೆಗೆ ಕುಲಗುರು ಭಾಸ್ಕರಾಚಾರ್ಯರ ನೇತೃತ್ವದಲ್ಲಿ ಪುತ್ರಕಾಮೇಷ್ಠಿಯಾಗದ ಫಲವಾಗಿ ಅವನ ಪತ್ನಿ ಕುಸುಮಾಂಬೆಯಲ್ಲಿ ವೈಶಾಖಮಾಸದ ಶುಕ್ಲಪಕ್ಷದ ದಶಮಿ ಶುಕ್ರವಾರ ಸಂಧ್ಯಾ ಕಾಲದಲ್ಲಿ ವಿಶಿಷ್ಟ ಲಕ್ಷಣದಿಂದ ಕೂಡಿದ 'ವಾಸವಿ' ಮತ್ತು 'ವಿರೂಪಾಕ್ಷ'ರೆಂಬ ಅವಳಿ ಮಕ್ಕಳ ಜನನ.

ವಾಸವಿಗೆ ಚಿಕ್ಕಂದಿನಿಂದಲೇ ಆಧ್ಯಾತ್ಮ ವಿದ್ಯೆಯಲ್ಲಿ ಅಭಿರುಚಿ ಹೆಚ್ಚು. ಲೌಕಿಕವಾದ ಭೋಗ ಭಾಗ್ಯಗಳಲ್ಲಿ ಅನಾಸಕ್ತಿ, ಯೌವನಕ್ಕೆ ಕಾಲಿರಿಸಿದರೂ ಯಾವುದೇ ರಾಜಕುಮಾರನ ಕೈಹಿಡಿದು ಸುಖ ಸಂಸಾರವನ್ನು ಸಾಗಿಸುವ ಕನಸು ಕಾಣದೆ ಏಕಾಂತ ವ್ಯಾಕುಲತೆ ಅಲೌಕಿಕ ಚಿಂತನೆಗಳಲ್ಲಿಯೇ ಮುಳುಗಿದಳು. ಹೀಗಿರಲು ಶಿವನು ಕನಸಿನಲ್ಲಿ ಕಂಡು 'ನೀನು ಪಾರ್ವತಿಯ ಅಂಶ. ಮಾನವ ಕುಲಕೋಟಿಯನ್ನು ಧರ್ಮಮಾರ್ಗದಲ್ಲಿ ನಡೆಸಲು ಜನಿಸಿದ್ದೀಯೇ.

ಅಗ್ನಿ ಮುಖದಿಂದ ಹುಟ್ಟಿದ ನೀನು ಅಗ್ನಿಮುಖದಲ್ಲಿಯೇ ನನ್ನನ್ನು ಸೇರುತ್ತಿಯೇ. ಮಾನವಳಾಗಿ ಜನಿಸಿದ ನಿನ್ನ ಅವತಾರ ಸಾರ್ಥಕವಾಗಬೇಕಾದರೆ ಸಂಶಯಗ್ರಸ್ತ ಜನರ ಮಂಜಿನ ಪೊರೆ ಕಳಚಿ ಸನ್ಮಾರ್ಗದಲ್ಲಿ ನಡೆಸುವ ಹೊಣೆ ನಿನ್ನದು' ಎಂದು ಹೇಳಿ ಅಂತರ್ಧಾನನಾಗುತ್ತಾನೆ.

*ಅಪರಿಮಿತ ಸೌಂದರ್ಯವತಿ ವಾಸವಿ*
                                                                                                    ಒಮ್ಮೆ ವಿಜಯ ಯಾತ್ರೆ ಕೈಗೊಂಡು ಪೆನುಗೊಂಡಕ್ಕೆ ಬರುವ ವಿಷ್ಣುವರ್ಧನ ಮಹಾರಾಜ, ಅಪರಿಮಿತ ಸೌಂದರ್ಯವತಿ ವಾಸವಿಯನ್ನು ಕಂಡು ಅವಳಲ್ಲಿ ಅನುರಕ್ತನಾಗುತ್ತಾನೆ. ವಾಸವಿಯಷ್ಟು ವಯೋಮಾನದ ಮಗನಿದ್ದರೂ ಅವಳನ್ನು ವಿವಾಹವಾಗಲು ಅಪೇಕ್ಷಿಸುತ್ತಾನೆ. ವರ್ಣಾಂತರ ಮತ್ತು ವಯಸ್ಸಿನ ಅಂತರವಿದ್ದುದರಿಂದ ಕುಸುಮ ಶ್ರೇಷ್ಠಿಯು ವಿಷ್ಣುವರ್ಧನನಿಗೆ ಮಗಳನ್ನು ಕೊಡಲು ನಯವಾಗಿ ನಿರಾಕರಿಸುತ್ತಾನೆ.

*ವಾಸವಿ ಸಾಮಾನ್ಯ ಕನ್ಯೆಯಲ್ಲ*      ‌                                                                                                                      
'ವಾಸವಿ ಸಾಮಾನ್ಯ ಕನ್ಯೆಯಲ್ಲ. ಇಂದ್ರಿಯ ನಿಗ್ರಹದಿಂದ ಮನಸ್ಸು ಅಂತಃಕರಣಗಳೆಲ್ಲಾ ಪರಿಶುದ್ಧವಾಗಿದೆ. ತಪಸ್ಸಿನ ತಾಪದಿಂದ ದೇಹ ಪ್ರಜ್ವಲಿಸುತ್ತದೆ. ಅಹಂಭಾವ ಸಂಪೂರ್ಣವಾಗಿ ಅಸ್ತಮಿಸಿ ಸಾಧಕಳಾಗಿ ಸಿದ್ಧಿ ಹೊಂದಿದವಳನ್ನು ಬಯಸುವುದು ಮಹಾಪಾಪ ಎಂದು ಎಚ್ಚರಿಸುತ್ತಾರೆ. ಆದರೆ ಯಾರು ಎಷ್ಟು ಹೇಳಿದರೂ ಚಕ್ರವರ್ತಿ ಹಠ ಬಿಡಲಿಲ್ಲ.

*ಯುದ್ಧ ಮಾಡಿ ಗೆಲ್ಲಲು ನಿರ್ಧರಿಸಿದ್ದ ವಿಷ್ಣುವರ್ಧನ*
                                                                                        ವಿಷ್ಣುವರ್ಧನನು ಯುದ್ಧ ಮಾಡಿ, ವಾಸವಿ ವಿವಾಹವಾಗಲು ಸಿದ್ಧತೆ ನಡೆಸಿದನು. ಆಗ ವಾಸವಿ ತೆಗೆದುಕೊಂಡ ನಿರ್ಧಾರ ಮಾತ್ರ ಅಪ್ರತಿಮ, ಯುದ್ಧಕ್ಕೆ ಅವಕಾಶ ಕೊಡಲಿಲ್ಲ. 'ಕೇವಲ ತನ್ನೊಬ್ಬಳ ಹಿತಕ್ಕಾಗಿ ಮುಗ್ಧ ಜನರ ಪ್ರಾಣ ಹಾನಿಯಾಗುತ್ತದೆ ಮತ್ತೆ ಯುದ್ಧ ನಡೆದರೆ ಅಪಾರ ಹಾನಿಯಾಗುತ್ತದೆ' ಎಂದು ನಿರ್ಧರಿಸಿದಳು.


*ವಾಸವಿ ಅಗ್ನಿ ಪ್ರವೇಶ ಮಾಡುವ ನಿರ್ಧಾರ*
                                                                          ಆರ್ಥಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ ಮುಗ್ಧ ಪ್ರಜೆಗಳಿಗೆ ಅಪಾರ ಹಾನಿಯುಂಟು ಮಾಡುವ ಈ ಯುದ್ಧವನ್ನು ಹೇಗಾದರೂ ಮಾಡಿ ತಪ್ಪಿಸಬೇಕೆಂದು ಚಿಂತಿಸಿದ ವಾಸವಿ ಅಗ್ನಿ ಪ್ರವೇಶ ಮಾಡುವ ನಿರ್ಧಾರ ತೆಗೆದುಕೊಂಡಳು. ಅಸಂಖ್ಯಾತ ಜೀವಗಳಿಗೆ ಒಳಿತಾಗುವುದಾದರೆ ತನ್ನ ಆತ್ಮಾಹುತಿ ಯಾಕಾಗಬಾರದು ಎಂದು ಆ ಷೋಡಷಿ ಯೋಚಿಸಿದಳು.

ವಾಸವಿಯ ಆತ್ಮಸ್ಥೈರ್ಯ ಅನನ್ಯವಾದುದು. ಆತ್ಮ ಮಹಾತ್ಯಾಗಕ್ಕಾಗಿ ಅಗ್ನಿ ಪ್ರವೇಶ ಮಾಡಿದಳು. ಧರ್ಮವನ್ನು ಬಿಟ್ಟುಕೊಟ್ಟು ಐಹಿಕ ಸುಖಭೋಗಗಳನ್ನು ಅನುಭವಿಸುವುದಕ್ಕಿಂತ ಧರ್ಮ ಸಂರಕ್ಷಣೆಗಾಗಿ ನಸುನಗುತ್ತ ಅಗ್ನಿ ದಿವ್ಯದಲ್ಲಿ ಬಂದಾಗ ಆತ್ಮಜ್ಯೋತಿ ಬೆಳೆಸಿದ ಆದಿಶಕ್ತಿಯ ಆದರ್ಶ ಅವತಾರ ಶ್ರೀ ವಾಸವಿ ಕನ್ಯಕಾಪರಮೇಶ್ವರಿಯದು. ಯುದ್ಧ ಮತ್ತು ರಕ್ತಪಾತವನ್ನು ತಡೆಗಟ್ಟಿ ಮನುಕುಲಕ್ಕೆ ಶಾಂತಿ ಸಂದೇಶವನ್ನು ನೀಡುವ ಸಲುವಾಗಿ ಅಗ್ನಿ ಪ್ರವೇಶ ಮಾಡಿ ದೇವತಾ ಸ್ಥಾನಮಾನ ಪಡೆದ ಅವತಾರಿಣಿ. ಆಕೆ ಜನಿಸಿದ ವೈಶಾಖ ಶುಕ್ಲದಲ್ಲಿ ದಶಮಿ 'ಈ ವಾಸವಿ ಕನ್ಯಕಾಪರಮೇಶ್ವರಿ ಜಯಂತಿ'

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Pls do not enter any spam link in the coment box